ಇತಿಹಾಸ

1943ರಲ್ಲಿ ಶಿವಮೊಗ್ಗದ ಮುಂಚೂಣಿಯ ನಾಗರಿಕರಿಂದ ಆರಂಭಗೊಂಡ ದೇಶೀಯ ವಿದ್ಯಾಶಾಲೆಯು ಕರ್ನಾಟಕದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಮಲೆನಾಡಿನ ಹೃದಯದಲ್ಲಿರುವ ಜಿಲ್ಲಾ ಕೇಂದ್ರವಾದ ಶಿವಮೊಗ್ಗ ನಗರದಲ್ಲಿ ಈ ಕಾಲೇಜು ಸ್ಥಾಪನೆಗೊಂಡಿದೆ. ದೇಶದಲ್ಲೇ ಅತಿದೊಡ್ಡ ಅಡಿಕೆ ಬೆಳೆಯ ಮಾರುಕಟ್ಟೆಗೆ ಶಿವಮೊಗ್ಗ ನಗರ ಹೆಸರಾಗಿದೆ. ಹೆಸರಾಂತ ಸಾಹಿತಿ ದಿಗ್ಗಜರಾದ ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಡಾ. ಯು.ಆರ್.ಅನಂತಮೂರ್ತಿ, ಇತಿಹಾಸಕಾರ ಡಾ.ಎಸ್.ಆರ್.ರಾವ್ ಮೊದಲಾದವರಿಗೆ ಜನ್ಮ ನೀಡಿದ ಜಿಲ್ಲೆ ಶಿವಮೊಗ್ಗ. ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಅಂತರರಾಷ್ಟ್ರೀಯ ಖ್ಯಾತಿಯ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರೂ ಸಹ ಈ ಜಿಲ್ಲೆಯವರೇ.

Dvs-inaguration

ಡಿ.ವಿ.ಎಸ್. ನ ಮುಖ್ಯ ಕಟ್ಟಡದ ಉದ್ಘಾಟನೆ – ದಿ. ಶ್ರೀ ಶ್ರೀ ಜಯಚಾಮರಾಜ ಒಡೆಯರ್

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ನೀಡಿದ ಕರೆಯ ಮೇರೆಗೆ ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಕರು ಸೇರಿ ಈ ಸಂಸ್ಥೆಯನ್ನು ಕಟ್ಟಿದರು. ರಾಷ್ಟ್ರೀಯವಾದದ ಕುರಿತು ಜಾಗೃತಿ ನೀಡುವುದು ಹಾಗೂ ಮಲೆನಾಡಿನ ಮಕ್ಕಳಿಗೆ ಶಿಕ್ಷಣ ನೀಡುವ ಘನವಾದ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಪ್ರಾರಂಭಗೊಳ್ಳುವಾಗ ಕೇವಲ 7 ವಿದ್ಯಾರ್ಥಿಗಳನ್ನು ಹೊಂದಿದ್ದ ಸಂಸ್ಥೆಯು ಇಂದು 6000 ವಿದ್ಯಾರ್ಥಿಗಳನ್ನು ಹೊಂದಿದ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ.