ಪ್ರಾಂಶುಪಾಲರ ಸಂದೇಶ

          ದೇಶೀಯ ವಿದ್ಯಾಶಾಲಾ ಸಂಸ್ಥೆಯಲ್ಲಿ ಪ್ರಾಂಶುಪಾಲನಾಗಿ ಕಾರ್ಯನಿರ್ವಹಿಸುವ ಈ ಅವಕಾಶ ಲಭಿಸಿರುವುದು ನನಗೆ ಸಂದ ಗೌರವವೆಂದೇ ನಾನು ಭಾವಿಸುತ್ತೇನೆ. ಮೂರು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವನಾಗಿ ಹಾಗೂ ಕಳೆದ ಒಂದು ವರ್ಷ ಆಡಳಿತ ಮಂಡಳಿಯ ಭಾಗವಾಗಿದ್ದುಕೊಂಡು ಈ ಸಂಸ್ಥೆಯ ಸಾಧನೆಗಳಿಗೆ ಸಾಕ್ಷಿಯಾಗಿದ್ದೇನೆ. ದೇಶೀಯ ವಿದ್ಯಾ ಶಾಲಾ ಕಲಾ ಮತ್ತು ವಾಣಿಜ್ಯ ಕಾಲೇಜು ಡಿವಿಎಸ್ ಸಮಿತಿ (ರಿ)ಯ ಆಡಳಿತದ ಸುಪರ್ದಿಯ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ಶಿಕ್ಷಣವನ್ನು ಸಮಾಜದ ಎಲ್ಲಾ ಜನವರ್ಗಗಳಿಗೆ ಕೊಂಡೊಯ್ದು, ಸ್ವಾತಂತ್ರ್ಯಾ ಪೂರ್ವದಲ್ಲಿ ಹಾಗೂ ನಂತರದಲ್ಲಿ ಯಾವ ಭಿನ್ನಭೇಧಗಳಿಲ್ಲದೇ ಶಿಕ್ಷಣವನ್ನು ಪ್ರಜಾತಾಂತ್ರೀಕರಿಸಿದ ಈ ಸಂಸ್ಥೆಯ ಸ್ಥಾಪಕ ಸದಸ್ಯರು ಇಟ್ಟ ಹೆಜ್ಜೆಯಲ್ಲಿ ಸುದೀರ್ಘವಾದ ಹಾದಿಯನ್ನು ಸವೆಸಿದೆ.

              ಪ್ರಸ್ತುತ ಈ ಕಾಲೇಜು ತನ್ನ ಸಂಸ್ಥಾಪಕರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಂಡಿದ್ದ ಕನಸನ್ನು ಸಾಕಾರಗೊಳಿಸಿಕೊಂಡು ಇದೊಂದು ಮುಂಚೂಣಿ ಸಂಸ್ಥೆಯಾಗಿ ನಿಂತಿದೆ. ಕುವೆಂಪು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಈ ಕಾಲೇಜು, 2ಎಫ್ ಮತ್ತು 12 ಬಿ ಹಾಗೂ ನ್ಯಾಕ್ ಮಾನ್ಯತೆಯಲ್ಲಿ ಬಿ ಶ್ರೇಣಿ ಗಳಿಸಿ 2.81 ಸಿಜಿಪಿಎ ಹೊಂದಿದ್ದು ಶಿವಮೊಗ್ಗ ಸುತ್ತಮುತ್ತ ಹೆಸರುವಾಸಿ ಕಾಲೇಜೆನಿಸಿಕೊಂಡಿದೆ. ಮೂಲ ವಿಜ್ಞಾನ, ಕಲಾ ಮತ್ತು ಮಾನವಿಕ ಶಾಸ್ತ್ರಗಳಿಗಾಗಿ ಸುಸಜ್ಜಿತ ಹಾಗೂ ಸುವ್ಯವಸ್ಥಿತ ಪ್ರಯೋಗಾಲಯಗಳನ್ನು ಕಾಲೇಜು ಹೊಂದಿದೆ. ಅನ್ವಯಿಕ ಜೀವಶಾಸ್ತ್ರ ತರಗತಿಗಳ ಅನುಕೂಲಕ್ಕಾಗಿ ಅತ್ಯುತ್ತಮವಾದ ಪ್ರಯೋಗಾಲಯವು ಪರಿಸರ ವಿಜ್ಞಾನದ ವಿಭಾಗದೊಂದಿಗೆ ಹೊಂದಿಕೊಂಡಿದ್ದು ಇದರ ಸದುಪಯೋಗವನ್ನು ಜೀವಶಾಸ್ತ್ರದ ಯೋಜನೆಗಳಿಗೆ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.

         ಇಲ್ಲಿಯ ವಿಜ್ಞಾನ, ಕಲಾ ಹಾಗೂ ಮಾನವಿಕ ಶಾಸ್ತ್ರಗಳ ಬೋಧಕ ಸಿಬ್ಬಂದಿಯ ಕುರಿತು ನನಗೆ ಅತ್ಯಂತ ಹೆಮ್ಮೆಯಿದೆ. ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವರು ಮಾದರಿಯಾಗಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿದ್ಯಾರ್ಥಿಗಳು 5 ರ್‍ಯಾಂಕ್‌ಗಳನ್ನು ಗಳಿಸಿರುವುದನ್ನು ವಿಶೇಷವಾಗಿ ಗಮನಿಸಲು ನನ್ನ ಕಳಕಳಿಯ ವಿನಂತಿ. ಅನೇಕ ವರ್ಷಗಳಿಂದ ಹಲವು ವಿಷಯಗಳಲ್ಲಿ ನಮ್ಮ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸುತ್ತಾ ಬಂದಿದ್ದಾರೆ.

          ಸಮಕಾಲೀನ ಸವಾಲುಗಳನ್ನೆದುರಿಸುವ ದೃಷ್ಟಿಯಿಂದ – ಐಸಿಟಿ ಉಪಕ್ರಮಗಳು, ಗ್ರಂಥಾಲಯದ ಡಿಜಿಟಲೀಕರಣ, ಯುಜಿಸಿ ಸಂಪನ್ಮೂಲ ಕೇಂದ್ರ ಸ್ಥಾಪನೆ, ಯುಜಿಸಿ ಸಂಶೋಧನಾ ಕಾರ್ಯಯೋಜನೆಗಳನ್ನು ನಮ್ಮ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ವೃತ್ತಿ ಮಾರ್ಗದರ್ಶನ ಕೋಶವು ಉತ್ತಮ ಸಾಮರ್ಥ್ಯ ತೋರುತ್ತಿದ್ದು ಪರಿಣಾಮವಾಗಿ ವಿಪ್ರೋ, ಅಕ್ಸೆಂಚರ್, ಇನ್ಫೋಸಿಸ್, ಟೆಕ್ ಮಹಿಂದ್ರಾ. ಎಂಫಸಿಸ್ ಮೊದಲಾದ ಕಡೆ ನಮ್ಮ ವಿದ್ಯಾರ್ಥಿಗಳು ಉದ್ಯೋಗವಾಕಾಶ ಗಿಟ್ಟಿಸಿಕೊಂಡಿದ್ದಾರೆ. ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶವನ್ನು ಕಾಲೇಜು ಮಾಡಿಕೊಟ್ಟಿದ್ದು, ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಮತ್ತು ರೆಡ್‌ಕ್ರಾಸ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸ ಹೊಂದಲು ಹಾಗೂ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಿಕೊಳ್ಳಲು ಅವಕಾಶವಾಗಿದೆ. ಇದಲ್ಲದೇ ವಿದ್ಯಾರ್ಥಿಗಗಳು ಬಯೋ ಕ್ಲಬ್, ಸಾಹಿತ್ಯ ವೇದಿಕೆ ಮತ್ತು ಇತಿಹಾಸ ವೇದಿಕೆ ಹಾಗೂ ಆರ್ಥಿಕ ವೇದಿಕೆಗಳ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಹಾಗೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಅನುವಾಗಿದೆ. ಜೀವಶಾಸ್ತ್ರ ಅಧ್ಯಯನದಲ್ಲಿ ಮಾದರಿ ಸಂಗ್ರಹಿಸಲು ಶೈಕ್ಷಣಿಕ ಪ್ರವಾಸಗಳನ್ನು ನಡೆಸಲಾಗುತ್ತದೆ. ಕೈಗಾರಿಕೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೂ ಶೈಕ್ಷಣಿಕ ಭೇಟಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

            ಕಾಲೇಜಿನ ಸುವರ್ಣ ಮಹೋತ್ಸವವನ್ನು ಆಚರಿಸುವ ಉದ್ದೇಶದಿಂದ ಕಾಲೇಜು ಇನ್ನಿತರ ವಿಶ್ವವಿದ್ಯಾಲಯಗಳು, ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೇಗಳು ಹಾಗೂ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ಹತ್ತು ಹಲವು ಶೈಕ್ಷಣಿಕ, ಸಂಶೋಧನಾ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಈ ಶೈಕ್ಷಣಿಕ ವರ್ಷದಿಂದ ಬಿ.ಕಾಂ ತರಗತಿಗಳನ್ನೂ ಆರಂಭಿಸಲಾಗುತ್ತಿದೆ.

                  ಕೊನೆಯದಾಗಿ ಆದರೆ ಮುಖ್ಯವಾಗಿ ಹೇಳುವುದೇನೆಂದರೆ ನಮ್ಮ ವಿದ್ಯಾರ್ಥಿಗಳ ಪೋಷಕರಿಗೆ ನಾನು ಹೇಳಬಯಸುವ ಹಾಗೂ ನನ್ನ ಗಟ್ಟಿ ನಂಬಿಕೆಯ ಮಾತೇನೆಂದರೆ, ನಿಮ್ಮ ಮಕ್ಕಳು ನಮ್ಮ ಮಕ್ಕಳೂ ಹೌದು, ಅವರ ಏಳಿಗೆ ಮತ್ತು ಸಮೃದ್ಧಿಯೇ ನಮ್ಮ ಧ್ಯೇಯವಾಕ್ಯವಾಗಿದೆ ಹಾಗೂ ಅತ್ಯುತ್ತಮ ಶೈಕ್ಷಣಿಕ ಸೇವೆಯನ್ನು ನಾವು ನಿಮಗೆ ಖಾತ್ರಿಪಡಿಸುತ್ತೇವೆ.

ಡಾ.ಎಂ ವೆಂಕಟೇಶ್
ಪ್ರಿನ್ಸಿಪಾಲರು,
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು
ಸರ್. ಎಂ.ವಿ.ರಸ್ತೆ. ಬಸವೇಶ್ವರ ವೃತ್ತ,
  ಶಿವಮೊಗ್ಗ-577 201.